ಡಾ.ಕಾಶಿನಾಥ ಅಂಬಲಗೆ ಚಿಪ್ಪಿನೊಳಗಿನ ಮುತ್ತು ಹೆಕ್ಕಿ ಪೋಣಿಸಿದ ಕವಿ







ಮಹಿಪಾಲರೆಡ್ಡಿ ಮುನ್ನೂರ್ 



ಡಾ.ಕಾಶಿನಾಥ ಅಂಬಲಗೆ
ಚಿಪ್ಪಿನೊಳಗಿನ ಮುತ್ತು ಹೆಕ್ಕಿ ಪೋಣಿಸಿದ ಕವಿ 


ನೀನೊಲಿದರೆ ಕಾವ್ಯವೇ! ಕೊರಡು ಕೊನರುವದೆಂದು ಕೇಳಿದ್ದೇನೆ ನಾನು
ಈ ಕೊರಡು ಸಮಾಜಕ್ಕೆ ಎಲೆ ಹೂಗಳಿಗಾಗಿ ಬಡಿದಾಡುತ್ತಿದ್ದೇನೆ ನಾನು

ನನ್ನ ಕಾಲವನ್ನು ಶಬ್ದಗಳಲಿ ಹಿಡಿದಿಡಲು ಹೆಣಗಾಡುತ್ತಿದ್ದೇನೆ ನಾನು
ಕಾಲದ ಶಬ್ದಾರ್ಥಗಳ ಸಹಕಾರ ಪಡೆಯಲು ಹೆಣಗಾಡುತ್ತಿದ್ದೇನೆ ನಾನು
ಗಜಲ್‍ವೊಂದರ ಕೆಲ ಶೇರುಗಳನ್ನು ಓದುತ್ತಿದ್ದರೆ, ಡಾ. ಕಾಶಿನಾಥ ಅಂಬಲಗೆ ಅವರ ಕಾವ್ಯ ಶಕ್ತಿ ಮತ್ತು ಅನುವಾದದ ಮೇಲೆ ಎಂಥಾ ಪ್ರೌಢಿಮೆಗೆ ಈ ಸಾಲುಗಳು ಸಾಕ್ಷಿಯಾಗುತ್ತವೆ.
ನನ್ನ ಪ್ರೀತಿಯ ಗಜಲ್ ಕವಿ, ಅಂಬಲಗೆ ಸರ್,
ನಿಮ್ಮನ್ನು `ಅನುವಾದಕ’ ಅನ್ನಬೇಕೋ.. ಹಿಂದಿ ಸಾಹಿತ್ಯವನ್ನು ಅರಗಿಸಿಕೊಂಡ `ಕವಿ’ ಅನ್ನಬೇಕೋ.. ಪಂಜಾಬಿ ಕಾವ್ಯವನ್ನು ಓದಿಕೊಂಡ `ಸಾಹಿತಿ’ ಅನ್ನಬೇಕೋ.. ಕನ್ನಡದ ಮಹತ್ವದ ಕವಿಗಳಲ್ಲಿ ನೀವೂ ಒಬ್ಬರು ಅಂತನ್ನಬೇಕೋ.. ನಾಟಕಕಾರ ಅನ್ನಬೇಕೋ.. ಶರಣ ಚಿಂತಕ ಅನ್ನಬೇಕೋ.. ಲಲಿತಕಲೆಯನ್ನು ಪ್ರೀತಿಸುವವರು ಅಂತನ್ನಬೇಕೋ.. ಹೌದು ಸಾರ್, ನಿಮ್ಮನ್ನು ಏನೂಂತ ಕರೀಬೇಕೂ ಅನ್ನೋದೇ ಗೊತ್ತಾಗುತ್ತಿಲ್ಲ.
ಗಜಲ್‍ಗಳನ್ನು ಹಿಂದಿಯಿಂದ ಕನ್ನಡಕ್ಕೆ.. ಕವಿತೆಗಳನ್ನು ಪಂಜಾಬಿಯಿಂದ ಕನ್ನಡಕ್ಕೆ -ನಾಟಕಗಳನ್ನು ಹಿಂದಿಯಿಂದ ಕನ್ನಡಕ್ಕೆ.. ಹೀಗೆ ಬೇರೆ ಬೇರೆ ಭಾಷೆಯಲ್ಲಿರುವ ಸಮೃದ್ಧ ಸಾಹಿತ್ಯವನ್ನು ಕನ್ನಡಕ್ಕೆ ತರುವುದರ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ವಿಸ್ತಾರಗೊಳಿಸುತ್ತಿದ್ದೀರಿ.
ನಿಮ್ಮ ಕಾವ್ಯದ ಭಾಷೆಯಲ್ಲಾಗಲೀ, ಅನುವಾದದ ಭಾಷೆಯಲ್ಲಾಗಲೀ, ನಾಟಕದ ಭಾಷೆಯಲ್ಲಾಗಲೀ.. ನೀವು ಬೀದರ್ ಜಿಲ್ಲೆಯವರು ಅನ್ನೋದು ಗೊತ್ತಾಗುವುದೇ ಇಲ್ಲ. ನೀವು ಮಾತನಾಡುವಾಗ ಮಾತ್ರ ಎಲ್ಲೋ ಒಂದು ಕೊನೆಯಲ್ಲಿ ಬೀದರ್ ಜಿಲ್ಲೆಯ ಭಾಷೆ ತೂರಿಕೊಂಡಿರುತ್ತದೆ. ನೀವು ಮಾತನಾಡುವ ಭಾಷೆಗೂ.. ಬರೆಯುವ ಭಾಷೆಗೂ ಸ್ವಲ್ಪ ವ್ಯತ್ಯಾಸವಿದೆ ಎಂದು ಹಲವರು ಅನುಮಾನ ಪಡುತ್ತಾರೆ.

.


ಬೀದರ್ ಜಿಲ್ಲೆಯ ವಿಶಿಷ್ಟ ಭಾಷೆಯ ಸತ್ವ ಮತ್ತು ಅದರ ಸೊಗಡು ಉಂಡು ಬೆಳೆದಿರುವ ಡಾ. ಕಾಶಿನಾಥ ಎಂಬ ಅಂಬಲಗೆಯವರೇ, ನಿಮ್ಮ ಕಾವ್ಯ ಭಾಷೆಗೆ ಅದೆಂತದೋ ಗತ್ತು ಇದೆ. ನಿಮ್ಮ ವಿಶಿಷ್ಟ ಅನುಭವದ ಅಭಿವ್ಯಕ್ತಿಯ ಮೂಲಕ ಜನತೆಯ ಕಣ್ಣು ತೆರೆಸಲು ನಿರತರಾದವರಲ್ಲಿ ನೀವು ಅಗ್ರಗಣ್ಯರು. ಕಾವ್ಯದಲ್ಲಿಯೇ ಆಗಲಿ.. ನಾಟಕದಲ್ಲಿಯೇ ಆಗಲಿ.. ಅನುವಾದ ಸಾಹಿತ್ಯದಲ್ಲಿಯೇ ಆಗಲಿ.. ನೀವು ಬಳಸುವ ಭಾಷೆ ಇದೆಯಲ್ಲಾ ಸಾರ್.. ಅದು ಓದಿಸಿಕೊಂಡು ಹೋಗುತ್ತದೆ. ತಟ್ಟನೆ ನಿಲ್ಲಿಸಿ ಯೋಚನೆ ಮಾಡುವಂತೆ ಹೇಳುತ್ತದೆ. ನೀವು ಸಹಜವಾಗಿ ಮಾತನಾಡುವಂತೆಯೇ ಸಲೀಸಾಗಿ ಬರೆಯುತ್ತೀರಿ. ನಿಮ್ಮೊಂದಿಗೆ ಮಾತನಾಡುವಾಗಿನ ಸಹಸಜತೆ ನೀವು ಬರೆಯುವ ಕಾವ್ಯದಲ್ಲಿಯೂ ಇರುತ್ತದೆ. ಹಾಗಾಗಿಯೇ ನೀವು ನಮ್ಮಂಥವರಿಗೆ ತುಂಬಾ ಇಷ್ಟವಾಗುತ್ತೀರಿ. ಅದರ ಜತೆಗೆ, ನಿಮ್ಮ ಕಾವ್ಯವೂ ಕೂಡ ಇಷ್ಟವಾಗುತ್ತದೆ. ಸದ್ಯ ಮತ್ತು ಮುಂದಿನ ದಿನಗಳಲ್ಲಿಯೂ ಸಹ. ಹೀಗಾಗಿ ಅಂಬಲಗೆ ಅಂದ್ರೆ, ವರ್ತಮಾನ ಮತ್ತು ಭವಿಷತ್ತಿನ ಕವಿ. ಅದನ್ನೇ ಜೀವಂತ ಕವಿ ಎಂದೂ ನಿಮ್ಮ ಹೊಗಳುವಾಗ ಹೇಳುತ್ತಾರೆ. ಇದನ್ನು ಕೇಳುವಾಗ ನಿಮಗೆ ಮುಜುಗರ ಅನಿಸುತ್ತದೆಯಲ್ಲವೇ ಸಾರ್..?
`ಮೂವತ್ತೈದು ಕವನಗಳು’ ಎಂಬ ನಿಮ್ಮ ಮೊದಲ ಸ್ವತಂತ್ರ ಕವನ ಸಂಕಲನಕ್ಕೂ ತೀರಾ ಇತ್ತೀಚೆಗೆ ಹಿಂದಿಯಿಂದ ಅನುವಾದ ಮಾಡಿರುವ ಪ್ರತಿಭಟನಾ ಜ್ವಾಲೆ ಪಂಜಾಬಿನ ಕವಿ `ಪಾಶ್’ ಅಥವಾ ರಘುವೀರ ಸಹಾಯ ಅವರ ಕವಿತೆಗಳು ಎಂಬ ಕವನ ಸಂಕಲನಕ್ಕೂ ಎಷ್ಟೊಂದು ವ್ಯತ್ಯಾಸವಿದೆ. ಆಗಿನ ಬರಹದಿಂದ ಈಗಿನ ಬರಹದವರೆಗೆ ಎಷ್ಟೊಂದು ಬೆಳೆದಿದ್ದೀರಿ. ಎಷ್ಟೊಂದು ಗಂಭೀರತೆ ಮೈಗೂಡಿಸಿಕೊಂಡಿದ್ದೀರಿ. ಎಷ್ಟೊಂದು ತಮಾಷೆ ಇದೆ. ಆಲೋಚನೆಗಳಿವೆ. ಸಮಾಜಕ್ಕೊಂದು ನೋಟ ಇದೆ. ದೂರದೃಷ್ಟಿ ಇದೆ. ಲವಲವಿಕೆಯ ಸಾಲುಗಳಿವೆ. ನಿಮ್ಮ ಗಜಲ್ ಓದಿಯೇ ದಂಗಾದವರಿದ್ದಾರೆ. ಸಾಮಾಜಿಕ ಕಳಕಳಿ ಇದೆ. ಹಂಬಲವಿದೆ. ಸೂಕ್ಷ್ಮ ಮನಸ್ಸಿದೆ. ಕನ್ನಡ ಅದರ ಜೊತೆಗೆ ಅನ್ಯ ಭಾಷೆಗಳ ಬಗ್ಗೆ ಪ್ರೀತಿಯಿದೆ. ಯಾವತ್ತಿಗೂ ಹೊಸ ವಿಚಾರ ಮತ್ತು ಸಂವೇದನೆಗೆ ತೊಡಗುತ್ತೀರಿ ಎಂಬುದೇ ಎಲ್ಲರಿಗೂ ಖುಷಿ ಕೊಡುತ್ತದೆ... ಅಲ್ವಾ ಸಾರ್..?
ಹೀಗೆಂದು, ಡಾ. ಕಾಶಿನಾಥ ಅಂಬಲಗೆ ಅವರಿಗೆ ಪತ್ರ ಬರೆಯಬೇಕೆಂದು ಅನಿಸಿತ್ತು. ಆದರೆ, ಅವರ ಗಜಲ್‍ಗಳನ್ನು ಓದುತ್ತಿದ್ದಂತೆಯೇ ಎಲ್ಲವೂ ಮರೆತಂತಾಗಿದೆ. ಯಾಕೆಂದರೆ,
ಕಾಶಿನಾಥ ಅಂಬಲಗೆ ಎಂದರೆ, ಕಣ್ಣೆದುರಿಗೊಂದು ಕಾವ್ಯ ರಸಸ್ವಾದವನ್ನು ಉಣಬಡಿಸುವ ಲಕ್ಷಣ ಪುರುಷ ಎದುರು ಬಂದು ನಿಲ್ಲುತ್ತಾರೆ. ಕನ್ನಡ ಸಾರಸ್ವತ ಲೋಕವನ್ನು ಈ ಶತಮಾನದ ಕೊನೆಯ ಭಾಗದಿಂದ ಇಲ್ಲಿಯವರೆಗೆ ಬದಲಾವಣೆಯ ಬಿರುಗಾಳಿಗೆ ದಿವ್ಯ ಕವಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ.
ಕವಿತೆಯಿಂದ ಕವಿತೆಗೆ, ಸಂಕಲನದಿಂದ ಸಂಕಲನಕ್ಕೆ, ಸುಪ್ತ ಮನಸ್ಸಿನಿಂದ ದಿವ್ಯ ಮನಸಿನವರೆಗೆ, ವಿಕ್ಷಿಪ್ತ ಜೀವಿಯಂತೆ ಇರದೇ ನಿರಂತರ ಕಾವ್ಯಯಾತ್ರೆಯನ್ನು ನಮ್ಮ ಕಣ್ಮುಂದೆ ನಿಲ್ಲಿಸುತ್ತಾರೆ.
ಸತತ ಕೌಶಲದಿಂದ ಗಳಿಸಿಕೊಂಡ ಕಾವ್ಯಭಾಷೆಯ ಪ್ರೌಢಿಮೆ, ಸಹಜತೆ ತುಂಬಿದ ಹಿರಿಯ ಕವಿಯಾಗಿ ಮಾತ್ರ ಯಾವತ್ತೂ ನೆನಪಾಗಿ ನಿಲ್ಲುತ್ತಾರೆ.
ಅತ್ತ ಮನೆಯ ಜಗಲಿ ಮೇಲೆ ಕುಳಿತು ತಮ್ಮ ಪತ್ನಿಯೊಂದಿಗೆ ಆಟವಾಡುತ್ತ.. ಇತ್ತ ಬದುಕಿನುದ್ದಕ್ಕೂ ಕವಿತೆಯೊಂದಿಗೆ ಸರಸವಾಡುತ್ತ.. ಇರುವುದನ್ನು ಕಂಡರೆ ಎಂಥವನಿಗೂ ಹೊಟ್ಟೆಕಿಚ್ಚು ಆಗುವಂತೆ ಮಾಡುತ್ತಾರೆ.
ಒಂದಲ್ಲ ಅನೇಕ ಸಾಹಿತ್ಯ ಪ್ರಕಾರಗಳ ಒಟ್ಟು ರೂಪ. ಅದರಲ್ಲಿ ಕಾವ್ಯವೂ ಒಂದು. ಆ ಕಾವ್ಯದಲ್ಲಿ ಗಜಲ್ ವಿಶಿಷ್ಟವಲ್ಲದೇ ಮತ್ತೇನೂ? ಅವರು ಮೇಧಾವಿಗಳು, ಅಭಿಜಾತ ಕಾವ್ಯ ಶಕ್ತಿಯನ್ನು ತನ್ನೊಡಲೊಳಗೆ ಇಟ್ಟುಕೊಂಡಿರುವ ಅಸಾಧಾರಣ ಕವಿ. ಕವಿತೆ, ಅನುವಾದ, ಗಜಲ್, ನಾಟಕ ಹೀಗೆ ಇನ್ನೇಸೋ.. ಬರೆದುಕೊಟ್ಟಿದ್ದಾರೆ.
ಇದೆಲ್ಲಕ್ಕಿಂತ ಮುಖ್ಯವಾಗಿ, ಓದುಗ ಸಮೂಹವನ್ನು ತನ್ನೆಡೆಗೆ ಸೆಳೆದುಕೊಳ್ಳಬಲ್ಲ ಛಾತಿ, ಅವರ ಕಾವ್ಯಕ್ಕಿದೆ.
ನಮ್ಮ ಕಾವ್ಯ ಸಮಾಜದಲ್ಲಿ, ಕಾಶಿನಾಥ ಅಂಬಲಗೆ ಅಂಥ ಕವಿಗಳು ನಾನಾ ಕಾರಣಗಳಿಗಾಗಿ ಇಂಟರೆಸ್ಟಿಂಗ್ ಅನ್ನಿಸುತ್ತಾರೆ. ಅವರ ನಿರಂತರ ಕಾವ್ಯ ಸಂಭ್ರಮ, ಓದುಗ ಬಳಗದಲ್ಲಿ ಅದೊಂದು ತೆರನಾದ ಗೆಲುವಿನ, ಸಮಾಧಾನದ ಮತ್ತು ಕಾವ್ಯದ ರಸಸ್ವಾದವನ್ನು ಆವಾಹಿಸಿಕೊಂಡ ಭಾವನೆ ಮೂಡುತ್ತದೆ.
ಗಜಲ್‍ಗಳನ್ನು ಕನ್ನಡಕ್ಕೆ ತಂದು ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸುತ್ತಿರುವ ಡಾ.ಕಾಶಿನಾಥ ಅಂಬಲಗೆ ಅವರ ಕಾಯಕ ನಿಜಕ್ಕೂ ಶ್ಲಾಘನೀಯ.
ಯಾಕೆಂದರೆ, ಅನುವಾದ ಎಂಬುದು ಅಷ್ಟು ಸರಳ ಸಾಹಿತ್ಯ ಪ್ರಕ್ರಿಯೆ ಅಲ್ಲ. ಅನುವಾದಗೊಳ್ಳುವ ಮೂಲ ಭಾಷೆ, ನುಡಿಗಟ್ಟು, ದರ್ಶನ, ಸಾಂಸ್ಕøತಿಕ ಪರಿಸರ ಮತ್ತು ಇತರರನ್ನು ಅರಿಯುವ ಹಾಗೂ ಅದನ್ನು ಗೌರವಿಸುವ, ಹಾಗೆಯೇ ಅದನ್ನು ತನ್ನದಾಗಿಸಿಕೊಳ್ಳುವ ಮೂಲಕ  ತನ್ನ ಸಾಂಸ್ಕøತಿಕ ಶ್ರೀಮಂತಿಕೆಯನ್ನು ವಿಸ್ತರಿಸಿಕೊಳ್ಳಬೇಕಾಗುತ್ತದೆ. ಆ ಮೂಲಕ ಸೃಜನಶೀಲತೆಯೊಂದಿಗೆ ಬೆಸೆದುಕೊಂಡಿರಬೇಕಾಗುತ್ತದೆ. ಅದರ ಆಶಯಗಳನ್ನು ಅನುವಾದಿಸುತ್ತಿರುವ ಭಾಷೆಯ ಲಯಕ್ಕೆ ಹೊಂದಿಸುವುದೊಂದು ನಿಜಕ್ಕೂ ಸವಾಲಿನ ಕಾರ್ಯವೇ ಸರಿ. ಅಂಥ ಸವಾಲಿನ ಕಾರ್ಯವನ್ನು ಸರಳವಾಗಿ ಮಾಡುವ ಮೂಲಕ ಡಾ.ಕಾಶಿನಾಥ ಅಂಬಲಗೆ ಅವರು, ಹಿಂದಿ ಮತ್ತು ಕನ್ನಡ ಭಾಷೆಗಳ ಮೇಲಿನ ಪ್ರೌಢಿಮೆಯನ್ನು ಮೆರೆದಿದ್ದಾರೆ.
ಗಜಲ್ ಪ್ರಕಾರವನ್ನು ಕನ್ನಡಕ್ಕೆ ಮೊದಲು ಕೊಟ್ಟವರು ಶಾಂತರಸ ಅವರು. ಶಾಂತರಸ ಎಂದರೇನೆ `ಗಜಲ್’ ಅನ್ನುವಷ್ಟರ ಮಟ್ಟಿಗೆ ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಆ ಸಾಲಿಗೆ ಈಗ ಡಾ. ಕಾಶಿನಾಥ ಅಂಬಲಗೆ ಸೇರ್ಪಡೆ. ಗಜಲ್ ಕುರಿತಂತೆ ಶಾಂತರಸ ಅವರ ಮಾತುಗಳಲ್ಲಿಯೇ ಕೇಳುವುದಾದರ, `ಕನ್ನಡ ಕಾವ್ಯಗಳಲ್ಲಿ ಸೂಳೆಗೇರಿಯ ವರ್ಣನೆ ಅತ್ಯಂತ ರೋಚಕವಾಗಿದೆ. ಆದರೆ, ಮಧುಶಾಲೆ ಮತ್ತು ಯೌವ್ವನದ ಪ್ರತೇಕ ವರ್ಣನೆ ಅಲ್ಲಿಲ್ಲ. ಈ ದೃಷ್ಟಿಯಿಂದ ಇವುಗಳ ವರ್ಣನೆ ಕನ್ನಡ ಕಾವ್ಯಲೋಕಕ್ಕೆ ಹೊಸದು’.
ಹಾಗೆ ನೋಡಿದರೆ, ಮೈಖಾನ (ಮಧುಶಾಲೆ), ಸಾಕಿ ಇವು ಉರ್ದು ಕಾವ್ಯದಲ್ಲಿ ತಮ್ಮದೇ ಆದ ವೈಶಿಷ್ಟ್ಯವನ್ನು ಪಡೆದಿವೆ. ಮೈಖಾನದ ಸಂಪ್ರದಾಯ ಫಾರ್ಸಿ ಸಾಹಿತ್ಯದಿಂದ ಬಂದದ್ದು. ಅದು ಉರ್ದು ಗಜಲ್‍ಗಳಲ್ಲಿ ವ್ಯಾಪಕವಾಗಿ ಬಳಕೆಯಾಗಿದೆ.
ಅಂದ ಹಾಗೆ, ಮೈಖಾನಾ ಎಂದರೆ, ಮದ್ಯ ಮಾರುವ ಅಂಗಡಿ. ಆದರೆ, ಇದು ಕಾವ್ಯಲೋಕದಲ್ಲಿ ಅಂತೆಯೇ, ನಿಜ ಜೀವನದಲ್ಲಿ ಅತ್ಯಂತ ವಿಶಿಷ್ಟವಾದ ಅರ್ಥವಿದೆ. ಕವಿಗಳು ಮೈಖಾನೆಯಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದರು. ಸರದಿಯಂತೆ ಸಾಕಿ ಮದ್ಯವನ್ನು ಕವಿಗಳಿಗೆ ನೀಡುತ್ತಿದ್ದಳು. ಈ ಮೈಖಾನೆಗೆ ತನ್ನದೇ ಆದ ಶಿಷ್ಟಾಚಾರವಿದೆ. ಕುಡಿದವನು ಅಲ್ಲಿ ಮತ್ತನಾಗಿ ಬಡಬಡಿಸಬಾರದು. ಪ್ರಜ್ಞೆಯನ್ನು ಕಳೆದುಕೊಳ್ಳಬಾರದು.
ರಾಜನ ಎದುರು ಓದುವ ಗಜಲ್‍ಗಳಿಗೆ ಧಿಮಾಕು ಬಹಳ
ರಾಜಧಾನಿಯಲಿ ಇರುವ ಕವಿಗಳಿಗೆ ಧಿಮಾಕು ಬಹಳ
ಅವರದೇ ಆದ ಗಜಲ್‍ವೊಂದರ ಈ ಶೇರುಗಳಿಗೆ ಅರ್ಥ ಬೇಕಿಲ್ಲ ಎನಿಸುತ್ತದೆ.
ಗಜಲ್ ಪರಂಪರೆಯ ಸೊಬಗು ಮತ್ತು ಸೊಗಡನ್ನು ಕಾಶಿನಾಥ ಅಂಬಲಗೆಯವರು ಕನ್ನಡ ಕಾವ್ಯ ರಸಿಕರಿಗೆ ಉಣಬಡಿಸಿ, ಹೊಸ ಲೋಕಕ್ಕೆ ಕರೆದೊಯ್ಯಲು ವೇದಿಕೆಯನ್ನು ತಯ್ಯಾರು ಮಾಡಿದ್ದಾರೆ. ಸುಮಾರು ಐದಾರು ಗಜಲ್ ಸಂಕಲನಗಳನ್ನು ಕನ್ನಡಕ್ಕೆ ತರುತ್ತಿರುವ ಈ ಸಂದರ್ಭದಲ್ಲಿ, ಕಾವ್ಯ ಪರಂಪರೆಯಲ್ಲಾಗಲೀ..  ಸಂಸ್ಕøತಿಯಲ್ಲಾಗಲೀ.. ಇದು ಹೊಸದೇ.
ಈ ಗಜಲ್‍ಗಳ ನವಿರು ಸ್ಪರ್ಶದ ಘಮಘಮಿಕೆ ಬಹುಕಾಲ ಕನ್ನಡದ ಓದುಗರನ್ನು ಹಿಡಿದಿಡುತ್ತದೆ. ಸಂಸಾರದ ಸಕಲ ಜಂಜಟಾಗಳ ನಡುವೆಯೂ ಕೆಲವು ಕಾಲ ನಮ್ಮ ಭಾವನೆಗಳನ್ನು ಅದ್ಭುತ ಲೋಕದಲ್ಲಿ ಸಂಭ್ರಮಿಸುವಂತೆ ಮಾಡುತ್ತದೆ. ಅಂಬಲಗೆ ಅವರು, ಗಜಲ್ ಕನ್ನಡಕ್ಕೆ ತರುವುದರ ಮೂಲಕ ಚಿಪ್ಪಿನೊಳಗಿನ ಮುತ್ತುಗಳನ್ನು ಹೆಕ್ಕಿ ಪೋಣಿಸಿದ್ದಾರೆ.
ಹಿಂದಿಯಿಂದ ಕನ್ನಡಕ್ಕೆ ಗಜಲ್, ನಾಟಕ, ಪತ್ರಕರ್ತನ ಕವಿತೆಗಳು, ಜ್ಞಾನಪೀಠ ಪುರಸ್ಕøತರ ಕವಿತೆಗಳು ಹೀಗೆ.. ಡಜನ್ ಮೇಲೊಂದು ಪುಸ್ತಕಗಳನ್ನು ತರುತ್ತಿದ್ದಾರೆ. ಅಷ್ಟೇ ಅಲ್ಲ, ಸದ್ಯದಲ್ಲಿಯೇ, `ಸತಿಯೇ ಸಾಕಿಯಾದ ಕವಿ ಸಮಯ’ ಎಂಬ ಕನ್ನಡ ಗಜಲ್‍ಗಳ ಧ್ವನಿಮುದ್ರಿಕೆಯನ್ನು ಹೊರತರುತ್ತಿದ್ದಾರೆ. ಸಂಗೀತ ನಿರ್ದೇಶಕ ಇಸ್ಮಾಯಿಲ್ ಗೋನಾಳ ಅವರ ಸಂಗೀತ ಸಂಯೋಜನೆಯಲ್ಲಿ ಹೈದ್ರಾಬಾದ್ ಕರ್ನಾಟಕ ಯುವ ಗಾಯಕರು ಹಾಡಿದ ಗಜಲ್ ಸಿಡಿ ಹೊರಬರಲಿದೆ.
ಹೀಗೆ, ಒಂದಿಲ್ಲೊಂದು ಸೃಜನಶೀಲ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಡಾ.ಕಾಶಿನಾಥ ಅಂಬಲಗೆ ಅವರು ಕೇವಲ ಸಾಹಿತಿಯಲ್ಲ.. ಕೇವಲ ಅನುವಾದಕ ಅಲ್ಲ.. ಸಾಂಸ್ಕøತಿಕ ವಲಯದ ಪ್ರತಿನಿಧಿ. ಯಾಕೆಂದರೆ, ಕಾವ್ಯದ ಪ್ರವಾಹವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಬಲ್ಲ ತಾಕತ್ತು ಅಂಬಲಗೆಯವರ ಬರಹಕ್ಕಿದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಊರು ಹಳ್ಳಿ..

ಕಪ್ಪು ಕಡಲು

ನನ್ನೂರಿನಲ್ಲಿ 'ಎಂ ಎಂ ಕಲಬುರಗಿ'..