ಅಂಬೇಡ್ಕರರನ್ನು ಅರಿಯುವುದೆಂದರೆ…
ಅರಕಲಗೂಡು ಜಯಕುಮಾರ್. ಪತ್ರಕರ್ತ
ಅಂಬೇಡ್ಕರರನ್ನು ಅರಿಯುವುದೆಂದರೆ…
ಭಾರತದ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ‘ಮೀಸಲಾತಿ’ ನಿಗದಿಯಾಗಿದ್ದು ಹಿಂದುಳಿದ ವರ್ಗದವರಿಗೆ, ಅದೂ ದಕ್ಷಿಣ ಭಾರತದಲ್ಲಿ ಶಾಹು ಮಹಾರಾಜ ಇಚ್ಛಾಶಕ್ತಿಯ ಫಲ. ನಂತರ ಮೈಸೂರು ಸಂಸ್ಥಾನದಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಡುವ ನಿರ್ದಾರ ಪ್ರಕಟವಾದಾಗ ಪ್ರಖರವಾಗಿ ವಿರೋಧ ವ್ಯಕ್ತಪಡಿಸಿದ ದಿವಾನ್ ವಿಶ್ವೇಶ್ವರಯ್ಯ ದಿವಾನ ಗಿರಿಗೆ ರಾಜೀನಾಮೆ ಒಗೆದು ಹೊರ ಬಿದ್ದರು. ಆದರೆ ಇವತ್ತಿಗೂ ಅರಿವುಗೇಡಿ ಮಂದಿ ಅವರ ಚಿತ್ರಗಳನ್ನಿಟ್ಟುಕೊಂಡು ದೇವರಂತೆ ಪೂಜಿಸುತ್ತಾರೆ ಎಂಬುದು ವಿಷಾದನೀಯ.
ಹಿಂದುಳಿದ ವರ್ಗದವರು ಸದಾ ಕಾಲಕ್ಕೂ ನೆನಪಿಟ್ಟುಕೊಳ್ಳ ಬೇಕಾದ ಮತ್ತು ಪೂಜಿಸ ಬೇಕಾದ ವ್ಯಕ್ತಿ ಭಾರತದ ಪ್ರಧಾನಿಯಾಗಿದ್ದ ವಿ ಪಿ ಸಿಂಗ್. ವಿ ಪಿ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಮಂಡಲ್ ಆಯೋಗದ ವರದಿ ಜಾರಿಗೆ ತರಲು ಹೊರಟರೆ, ಮೇಲ್ವರ್ಗದ ಚಿತಾವಣೆಗೆ ಸಿಲುಕಿದ ಶೂದ್ರರೇ ಮಂಡಲ್ ಆಯೋಗದ ಅನುಷ್ಠಾನಕ್ಕೆ ಬಹು ದೊಡ್ಡ ತಡೆಗೋಡೆಯಾಗಿ ನಿಂತು ಬಿಟ್ಟರು. ರಾಷ್ಟ್ರಾಧ್ಯಂತ ಮಂಡಲ್ ಆಯೋಗದ ವರದಿಯನ್ನು ವಿರೋಧಿಸಿ ಹರತಾಳ ನಡೆದವು. ದೇಶದ ಪ್ರತಿಷ್ಠಿತ ಐಐಟಿಯಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ತರಲು ಹೊರಟರೆ ಅಲ್ಲಿಯೂ ಅರಿವುಗೇಡಿಗಳು ಪ್ರತಿಭಟನೆಗೆ ನಿಂತು ಅಪೂರ್ವ ಅವಕಾಶವನ್ನು ತಪ್ಪಿಸಿಕೊಂಡವು.
ಇಷ್ಟಕ್ಕೂ ಈ ಮೀಸಲಾತಿ ಎಂದರೆ ಏನು? ಯಾಕೆ ಅದನ್ನು ವಿರೋಧಿಸಲಾಗುತ್ತಿದೆ? ಮೀಸಲಾತಿ ಫಲಾನುಭವಿಗಳನ್ನು ತುಚ್ಚವಾಗಿ ನೋಡುವ ಅಗತ್ಯವಿದೆಯೇ? ಎಂಬ ಪ್ರಶ್ನೆಗಳನ್ನು ವರ್ತಮಾನದಲ್ಲಿ ಪ್ರತಿಯೊಬ್ಬರು ಹಾಕಿಕೊಳ್ಳ ಬೇಕಾದ ಅಗತ್ಯವಿದೆ. ಮೀಸಲಾತಿ ಹಿಂದಿನ ಸತ್ಯಗಳನ್ನು ಪುನರಾವಲೋಕನ ಮಾಡಿಕೊಳ್ಳುವಾಗ ಅರಗಿಸಿಕೊಳ್ಳಲಾಗದ ವಾಸ್ತವಗಳನ್ನ ಗ್ರಹಿಕೆಗೆ ತಂದುಕೊಳ್ಳುವ ಸೂಕ್ಷ್ಮತೆ ವರ್ತಮಾನದಲ್ಲಿ ಕಳೆದು ಹೋಗಿರುವುದರಿಂದ “ಮೀಸಲಾತಿ” ಪರಿಧಿಯನ್ನು ಆರ್ಥಿಕತೆಯ ಮಾನದಂಡದಲ್ಲಿ ಗ್ರಹಿಸುವ ಅಪಾಯ ಸನ್ನಿವೇಶದಲ್ಲಿದ್ದೇವೆ.
ಮೀಸಲಾತಿ ಎಂದರೆ ಸಾಮಾಜಿಕ ನ್ಯಾಯದ ಮಾನದಂಡ, ಮನುಷ್ಯರನ್ನು ಮನುಷ್ಯರಂತೆ ಕಾಣುವ ಕ್ರಿಯೆಗಳು ಸತ್ತು ಹೋಗಿರುವ ಈ ಹೊತ್ತಿನಲ್ಲಿ ಧ್ವನಿ ಅಡಗಿ ಹೋದ ಜೀವಗಳಿಗೆ ಕನಿಷ್ಠ ಉಸಿರಾಡುವಂತೆ ಮಾಡುವ ಕ್ರಿಯೆ. ಜೀವಪರ ಕಾಳಜಿಯ ಸೂಕ್ಷ್ಮ ಮನಸ್ಸುಗಳಿಗೆ ಮಾತ್ರ ಇದು ಅರ್ಥವಾದೀತು. ಸಾಮಾಜಿಕ ಅಸ್ಪೃಶ್ಯತೆಗೂ, ಆರ್ಥಿಕ ಅಸ್ಪೃಶ್ಯತೆಗೂ ಅಜಗಜಾಂತರ ವ್ಯತ್ಯಾಸವಿದೆ. ಹಾಗೆಯೇ ದಲಿತರು ಅನುಭವಿಸುವ ಅಸ್ಪೃಶ್ಯತೆಗೂ, ಅಮೇರಿಕಾದ ನೀಗ್ರೋಗಳು ಅನುಭವಿಸುವ ಅಸ್ಪೃಶ್ಯತೆಗೂ ಸಾಕಷ್ಟು ವ್ಯತ್ಯಾಸವಿದೆ. ದಲಿತರು ಅನುಭವಿಸುವ ಸಾಮಾಜಿಕ ಅಸ್ಪೃಶ್ಯತೆಯಲ್ಲಿ ಬದುಕುವ ಹಕ್ಕುಗಳನ್ನೇ ನಿರಾಕರಿಸಲಾಗುತ್ತದೆ, ನೀಗ್ರೋಗಳು ಅನುಭವಿಸುವ ಅಸ್ಪೃಶ್ಯತೆಯಲ್ಲಿ ಬದುಕುವ ಹಕ್ಕುಗಳಿಗೆ ಧಕ್ಕೆಯಿಲ್ಲ ಆದರೆ ಸಮಾನತೆಯ ಹಕ್ಕುಗಳನ್ನು ನಿರಾಕರಿಸಲಾಗುತ್ತದೆ. ಹಾಗಾಗಿ ಭಾರತದಲ್ಲಿ ದಲಿತರು ಅನುಭವಿಸುವ ಸಾಮಾಜಿಕ ಅಸಹನೆ ಅತ್ಯಂತ ಕ್ರೂರವಾದುದು, ಮತ್ತು ಆ ವರ್ಗಕ್ಕೆ ಮಾನಸಿಕ ಸ್ಥೈರ್ಯ ನೀಡುವ ಕೆಲಸ “ಮೀಸಲಾತಿ” ಯಿಂದ ಮಾತ್ರ ಸಾಧ್ಯ ಎಂಬುದು ಇಂದಿನ ತುರ್ತು.
“ಮೀಸಲಾತಿ”ಯ ಫಲಾನುಭವಿಗಳ ಪಟ್ಟಿಯಲ್ಲಿ ಮಹಿಳೆಯರು ವರ್ತಮಾನದಲ್ಲಿ ಮಂಚೂಣಿ ಸ್ಥಾನ ಪಡೆದಿದ್ದಾರೆ. ಸಂಸತ್ ನಲ್ಲಿ ಮಹಿಳೆಯರಿಗೆ ಆಸ್ತಿ ಹಕ್ಕು, ರಾಜಕೀಯ, ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಬೇಕು ಎಂದು ಪಟ್ಟು ಹಿಡಿದ ಭಾರತ ರತ್ನ ಸಮತೆಯ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ತಮ್ಮ ಬೇಡಿಕೆ ಈಡೇರದಿದ್ದಾಗ ರಾಜೀನಾಮೆ ಒಗೆದು ಬಂದರು, ಅಧಿಕಾರವನ್ನೇ ತ್ಯಾಗ ಮಾಡಿದರು ಅಂತಹ ಅಂಬೇಡ್ಕರ್ ಗೆ ಇವತ್ತು ಮಹಿಳಾ ವಲಯದಲ್ಲಿ ಸ್ಥಾನವಿಲ್ಲ! ಸಾಮಾಜಿಕ ವಲಯದಲ್ಲಿ ಹಕ್ಕುಗಳನ್ನು ಪ್ರತಿಪಾದಿಸುವ, ಪ್ರಶ್ನೆಗಳನ್ನು ಕೇಳುವ ಚಳುವಳಿ ರೂಪಿತವಾಗಿದ್ದೆ ಡಾ ಬಿ ಆರ್ ಅಂಬೇಡ್ಕರ್ ಅವರಿಂದ. ಪ್ರತಿಫಲನವಾಗಿ ಸ್ವತಂತ್ರ ಭಾರತದಲ್ಲಿ ಸಾರ್ವತ್ರಿಕವಾಗಿ ಹುಟ್ಟಿದ ಎಲ್ಲ ಚಳುವಳಿ ಹಿಂದೆಯೂ ಅಂಬೇಡ್ಕರ್ ಹಾಕಿ ಕೊಟ್ಟ ಬುನಾದಿ ಇದೆ. ಆದರೆ ಅಂಬೇಡ್ಕರ್ ಅವರನ್ನು ಅರಿಯುವ ಪ್ರಯತ್ನಗಳಿಗೆ ಹಿನ್ನೆಡೆಯಾಗಿದೆ. ಅಂಬೇಡ್ಕರ್ ತೋರಿದ ಹಾದಿಯಲ್ಲಿ ನಡೆಯುವ ಬದಲಿಗೆ ಅವರನ್ನೆ ದೇವರಾಗಿ ಪೂಜಿಸುತ್ತಾ ಅದರಾಚೆಗೂ ಅಂಬೇಡ್ಕರ್ ತೋರಿಸಿದ ಬೆಳಕಿನ ಹಾದಿಯಿದೆ ಎಂಬ ಸತ್ಯ ದಲಿತರಿಗೂ ಅರ್ಥವಾದಂತಿಲ್ಲ. ಇದರ ಪರಿಣಾಮ ದಲಿತೇತರರು ಅಂಬೇಡ್ಕರರನ್ನು ಅರಿಯುವ ಪ್ರಯತ್ನಕ್ಕೆ ಭಾಗಶ: ತಡೆಗೋಡೆಯಾಗಿರ ಬಹುದೇನೋ.
ಅಂಬೇಡ್ಕರರನ್ನು ದಕ್ಕಿಸಿಕೊಳ್ಳುವುದೆಂದರೆ ಪ್ರಶ್ನಾ ಮನೋಭಾವ, ಹಕ್ಕುಗಳ ಪ್ರತಿಪಾದನೆ, ಪ್ರಗತಿಪರವಾದ ಚಿಂತನೆ, ವಾಸ್ತವವನ್ನು ಪರಿಗ್ರಹಿಸಿ ನೋಡುವುದೇ ಆಗಿದೆ. ಆದರೆ ವರ್ತಮಾನದಲ್ಲಿ ಸೂಕ್ಷ್ಮ ಗ್ರಹಿಕೆಗಳೇ ಕಳೆದು ಹೋಗಿವೆ, ಅರಿವಿನ ಬೆಳಕಿಗೆ ವರ್ತಮಾನದಲ್ಲಿ ನಮ್ಮನ್ನು ಒಡ್ಡಿಕೊಳ್ಳ ಬೇಕಿದೆ. ಅಂಬೇಡ್ಕರ್ ಎಂಬ ಹಣತೆಯನ್ನು ಎದೆಯ ಗೂಡಿನಲ್ಲಿ ಇರಿಸಿಕೊಂಡು ಪುನರಾವಲೋಕಿಸಬೇಕಾದ ತುರ್ತು ಇದೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ