`ಗಿರಿ’ಸಾಲು ನಡುವೆ ಈ `ಹೊನ್ನ’ಕಲ್




ಮಹಿಪಾಲರೆಡ್ಡಿ ಮುನ್ನೂರ್ 



`ಗಿರಿ’ಸಾಲು ನಡುವೆ ಈ `ಹೊನ್ನ’ಕಲ್

ಒಂದಿಷ್ಟೂ ಸುಳ್ಳಲ್ಲ..
ಆತ ಅಕ್ಷರಶಃ ಅಭಿಜಾತ ಪ್ರತಿಭೆ. ಅದ್ಭುತ ಬರಹಗಾರ. ಆರೋಗ್ಯ ಇಲಾಖೆಯಲ್ಲಿ ನೌಕರಿಯೆಂಬೋ ನೌಕರಿಯನ್ನು ಹೊದ್ದುಕೊಂಡೇ , ಜತನದಿಂದ ಅದಕ್ಕೆ ಗಂಟುಬಿದ್ದು, ಇಲಾಖೆ ಕಳಿಸಿದ ಊರುಗಳಿಗೆ ಹೋಗಿ.. ತಿರುಗಾಡಿ.. ಸುಸ್ತಾಗಿ.. ಮನೆಯ ಮೂಲೆಯಲ್ಲಿ ನಿಂತು ಒಂದು ಕಪ್ಪು ಚಹಾ ಕುಡಿದು.. ಹಾಗೇ ಸುಮ್ಮನೆ ಕೂಡು ಎಂದು ಕೂಡಿಸಿದರೂ... ಅಲ್ಲಿಯೇ ಕುಂತಲ್ಲಿಯೇ ಒಂದು ಕವಿತೆಯನ್ನೋ.. ಚುಟುಕನ್ನೋ.. ಲಲಿತ ಪ್ರಬಂಧವನ್ನೋ.. ಇದೆಲ್ಲ ಹೊರತಾಗಿಯೂ ಯಾವುದೋ ರಾಜ್ಯದ ಗಡಿಯ ರೇಖೆಯನ್ನು ಮುಟ್ಟಿ ಬರುವ ನಿರ್ಧಾರವನ್ನೋ.. ಮಾಡು ಮಾಡುತ್ತಲೇ ಪುರುಸೊತ್ತಿಲ್ಲದೇ ಓದಲು.. ಬರೆಯಲು.. ಸವುಡಿಲ್ಲದೇ ತೊಡಗುವ ಈತ ಸಗರನಾಡಿನ ಸನ್ಮಿತ್ರ. 
ಹಾಗೇ ನೋಡಿದರೆ. ಅವರೊಬ್ಬ ಆರೋಗ್ಯ ಇಲಾಖೆಯ ಶಿಕ್ಷಣ ನೀಡುವ ಕಾಯಕದಲ್ಲಿ ತೊಡಗಿರುವ ಪಕ್ಕಾ ನೌಕರಸ್ಥ. ಆದರೆ, ಸಾಹಿತ್ಯದಲ್ಲಿ ಏನು ಗೊತ್ತಿಲ್ಲ ಹೇಳಿ? 
ಹೌದು, ಅವರು ಗಳಿಸಿರುವ ಜ್ಞಾನ ಮತ್ತು ಅದರ ವಿಸ್ತಾರ ಬಹು ದೊಡ್ಡದು. ಚುಟುಕು ಬರೆಯುತ್ತಲೇ ನಾಡಿನಲ್ಲಿ ಹೆಸರು ಮಾಡಿದ್ದಾರೆ.. ಲಲಿತ ಪ್ರಬಂಧ ಬರೆದು ಬರೆದು ಪ್ರಬಂಧಕಾರರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಕವಿತೆಗಳನ್ನು ರಚಿಸಿ ತಮ್ಮ ಪ್ರತಿಭೆಯ ವಿಸ್ತಾರದ ಹರಿವು ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಏಕೆ, ಹೊರ ರಾಜ್ಯಗಳಿಗೆ ಪ್ರವಾಸ ಹೋಗಿ, ಬಂದು ಪ್ರವಾಸ ಕಥನಗಳನ್ನು ಬರೆದು ಅದಕ್ಕೊಂದು ಅರ್ಥವಂತಿಕೆಯನ್ನು ನೀಡಿದ್ದಾರೆ. ಇವೆಲ್ಲವೂ ಸೇರಿಕೊಂಡಿದ್ದರಿಂದಲೇ ಸಾಹಿತ್ಯ ಕ್ಷೇತ್ರಕ್ಕೂ ಶ್ರೀಮಂತಿಕೆಯನ್ನು ತಂದುಕೊಡುವಲ್ಲಿ ಅವರ ಪಾತ್ರವೂ ಇದೆ. ಈಗ ಸ್ಪಷ್ಟವಾಗಿ ಗೊತ್ತಾಗಿರಬೇಕು.. ಅವರ ಹೆಸರು ಸಗರನಾಡಿನ ಶಹಾಪುರದ ಶ್ರೀ ಸಿದ್ಧರಾಮ ಹೊನ್ಕಲ್.


`ಗಿರಿ’ಗಳ ಸಾಲುಗಳ ನಡುವೆ ಈತ `ಹೊನ್ನ’ಕಲ್
ಸಾಹಿತ್ಯದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ ಹೊನ್ಕಲ್ ಅವರು, ನೌಕರಿಯಿಂದ ತಪ್ಪಿಸಿಕೊಂಡು ಸಾಹಿತ್ಯಕ್ಕೆ.. ಸಾಹಿತ್ಯದೊಳಗೆ ಇದ್ದುಕೊಂಡೇ ಆರೋಗ್ಯ ಇಲಾಖೆಯನ್ನು ಸಂಭಾಳಿಸುತ್ತಿರುವ ಕವಿ ಮಿತ್ರ.. ಕಥೆಗಾರ ನಮ್ಮ ಸಿದ್ಧರಾಮ ಹೊನ್ಕಲ್. 
ಅಂಥ ಸಿದ್ಧರಾಮ ಹೊನ್ಕಲ್ ಅವರನ್ನು ನೂತನ ಯಾದಗಿರಿ ಜಿಲ್ಲೆಯ ಚುಟುಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿಸಿದ್ದು, ನಿಜಕ್ಕೂ ಅಭಿನಂದನಾರ್ಹ ಕಾರ್ಯ. `ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ಸಿದ್ಧರಾಮ ಹೊನ್ಕಲ್ ಅವರ ಚುಟುಕುಗಳು ಪ್ರಕಟವಾಗದ ವಾರಗಳೇ ಇಲ್ಲದಿಲ್ಲ.  ಆರಂಭದ ಒಂದಿಷ್ಟು ವಾರಗಳೇ ಏಕೆ, ಮೂರ್ನಾಲ್ಕು ವರ್ಷ ಹೊನ್ಕಲ್ ಅವರ ಅನೇಕ ಚುಟುಕುಗಳು ಓದಿದ್ದೇವೆ. 
ನಮ್ಮ ಭಾಗದ ಚುಟುಕು ಕವಿಯೊಬ್ಬರ ಅನೇಕ ಚುಟುಕುಗಳು, ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ, ಅದರಲ್ಲೂ ಆ ಕಾಲಕ್ಕೆ ಅತ್ಯಂತ ಹೆಚ್ಚು ಪ್ರಸಾರಗೊಳ್ಳುತ್ತಿದ್ದ ಮತ್ತು ಎಲ್ಲಾ ಪ್ರಕಾರದ ಓದುಗರ ಬಳಗವನ್ನು ಹೊಂದಿದ್ದ `ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ಓದುವುದೆಂದರೆ ನಿಜಕ್ಕೂ ಖುಷಿಯ ಸಂಗತಿಯಲ್ಲದೇ ಮತ್ತೇನು?
ಈಗ ಸಮ್ಮೇಳನದ ಹಿನ್ನೆಲೆಯಲ್ಲಿ, ಹೊನ್ಕಲ್ ಅವರ ಬಗ್ಗೆ ಪ್ರಕಟಿಸುತ್ತಿರುವ `ಸಂದರ್ಭ ಗ್ರಂಥ’ಕ್ಕೆ ಅವರೇ ಬರೆದ ಪ್ರವಾಸ ಕಥನ `ಕನ್ಯಾಕುಮಾರಿಯಿಂದ ಹಿಮಾಲಯದೆಡೆಗೆ’ ಎನ್ನುವ ಕೃತಿಯ ಬಗ್ಗೆ ಒಂದಿಷ್ಟು ಅವಲೋಕಿಸಿದ್ದೇನೆ. ಆ ಪುಸ್ತಕವನ್ನು ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ, ಪುಸ್ತಕ ಕುರಿತು ಮಾತನಾಡುವ ಅವಕಾಶ ಸಿಕ್ಕಿತು. ಅದನ್ನು ನೆನಪು ಮಾಡಿಕೊಂಡು ಇಲ್ಲಿ ಕೊಟ್ಟಿದ್ದೇನೆ. ಪುಸ್ತಕ ಬಿಡುಗಡೆ ಮಾಡುವ ಸಂದರ್ಭದ ಅಭಿಪ್ರಾಯಗಳು, ಈಗಿನ ಸಂದರ್ಭದಲ್ಲಿ ಬದಲಾವಣೆ ಆಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಆದರೆ, ಆ ಸಂದರ್ಭದ ಅಭಿಪ್ರಾಯವನ್ನು ಈಗ ಬದಲಾವಣೆ ಮಾಡಿದಲ್ಲಿ, ಚಾರಿತ್ರಿಕವಾಗಿ ಸರಿಯೆನಿಸುವುದಿಲ್ಲ ಎಂಬ ಮಾತಿನ ಹಿನ್ನೆಲೆಯಲ್ಲಿ ಅದನ್ನು ಯಥಾವತ್ತಾಗಿ ಕೊಡುತ್ತಿದ್ದೇನೆ. ಒಪ್ಪಿಸಿಕೊಳ್ಳಿ. 
"........ ಆದರೆ,  ಶ್ರೀ ಸಿದ್ಧರಾಮ ಹೊನ್ಕಲ್ ಅವರು ಬರೆದ ಪ್ರವಾಸ ಕಥನ `ಕನ್ಯಾಕುಮಾರಿಯಿಂದ ಹಿಮಾಲಯದೆಡೆಗೆ' ಪುಸ್ತಕದ ಮೂಲಕ ಏನನ್ನು ಹೇಳಲು ಹೊರಟಿದ್ದಾರೆ? ಇದರ ಅಂತಿಮ ಆಶಯವೇನು? ಎಂದು ಮತ್ತೆ ಮತ್ತೆ ಈ ಪ್ರವಾಸ ಕಥನವನ್ನು ಓದುತ್ತೇವೆ. ಆದರೂ ಉತ್ತರ ಮಾತ್ರ ಸಿಗುವುದಿಲ್ಲ.
`ಕನ್ಯಾಕುಮಾರಿಯಿಂದ ಹಿಮಾಲಯದೆಡೆಗೆ' ಎಂಬ ಪ್ರವಾಸದ ಕಥನವನ್ನು  ಹೊಂದಿರುವ ಈ ಪುಸ್ತಕದ ನಿರೂಪಕರೂ ಆದ ಸಿದ್ಧರಾಮ ಹೊನ್ಕಲ್ ಅವರು, ಅತ್ಯಂತ ಸೂಕ್ಷ್ಯ ಮತ್ತು ಸಂವೇದಿ. ಆತ `ಪ್ರವಾಸದ' ಬೆಳಕಿನಲ್ಲೇ `ಕಥನ'ವನ್ನು ಹುಡುಕುತ್ತಾನೆ. ಆತನಿಗೆ ಮನುಷ್ಯ ಕಲ್ಪನೆಗಳು, ಸಂಸ್ಕøತಿ, ಭಾಷೆ, ಜನಜೀವನದ ಪ್ರಜ್ಞೆ ಗಾಢವಾಗಿದೆ.


ದಕ್ಷಿಣದಿಂದ ಉತ್ತರದವರೆಗೆನ ಜರ್ನಿ ಮತ್ತು ಕಟ್ ಜರ್ನಿಗಳ ವಿವಿಧ ಸ್ಥಳಗಳಲ್ಲಿ ಆಗಿರುವ ಜೀವನಾನುಭವಗಳನ್ನು, ಆ ನೆಲದ ಸಂಸ್ಕøತಿಯನ್ನು ಅಲ್ಲಿನ ಭಾಷೆಯನ್ನು ಜನರ ಜೀವನ ಮಟ್ಟವನ್ನು ಕುರಿತು ದಟ್ಟವಾಗಿ ಮೂಡಿಬಂದಿದೆ.
ಈ ಪ್ರವಾಸ ಕಥನದಲ್ಲಿ ಆಗಿರುವ ಅನುಭವಗಳು, ಘಟನೆಗಳು ಎಂಥ ಓದುಗನಿಗೂ ಎಲ್ಲೋ ಒಂದು ಕಡೆ `ಇವು ತನ್ನವೂ' ಆಗಿರುತ್ತದೆ.
ಕವಿಯಾಗಿ, ಕಥೆಗಾರನಾಗಿ, ಪ್ರಬಂಧಕಾರನಾಗಿ, ಈಗ ಪ್ರವಾಸ ಕಥನದ ನಿರೂಪಕನಾಗಿರುವ ಸಿದ್ಧರಾಮ ಹೊನ್ಕಲ್‍ರು ಸಗರನಾಡು ಶಹಾಪುರದಿಂದಲೇ ತಮ್ಮ ಪ್ರವಾಸದ ಕಥನವನ್ನು ಆರಂಭಿಸಿದ್ದಾರೆ.
ಆತಂಕಪಡುವ ಭಾಷೆ ಬಳಸಿಲ್ಲ. ಪ್ರಾಮಾಣಿಕ ಪ್ರಯತ್ನದ ಹರಿವನ್ನು ಕಥನದುದ್ದಕ್ಕೂ ನೋಡಬಹುದು. ಸರಳವಾದ ಓದು ಇಲ್ಲಿದೆ. ಭಾರವಾಗುವ ನಿರೂಪಣೆ ಇಲ್ಲಿಲ್ಲ. ಓದುಗನಿಗೆ ಇಷ್ಟವಾಗುವಂತೆ ಬರೆಯಬಲ್ಲರು ಎಂಬುದಕ್ಕಿಂತ, ಓದುಗನ್ನು ಓದಿನೆಡೆಗೆ ಸೆಳೆದುಕೊಳ್ಳ ಬಲ್ಲರು ಎಂದಷ್ಟೇ ಹೇಳಬಲ್ಲೆ.
ಸಿದ್ಧರಾಮ ಹೊನ್ಕಲ್ ಅವರು ಈ ಸಂದರ್ಭದಲ್ಲೂ ಚುರುಕಾದ ಬರಹಗಾರ. ತಮಗಾದ ಅನುಭವವನ್ನು ಆಕರ್ಷಣೆಯಿಂದ ಬರೆಯಬಲ್ಲರು. ಇವರು ಕಂಡಿರುವ ಪ್ರವಾಸದ ಅನುಭವ, ಜೀವನ ಪ್ರೀತಿ, ದೇಶ ಸುತ್ತುವ ಕಾವ್ಯ ಮತ್ತು ಅದರೊಂದಿಗೆ ಚಿಂತನಶೀಲ ಬರವಣಿಗೆ ಹೊನ್ಕಲ್‍ರನ್ನು ಎಂಧ ಇಕ್ಕಟ್ಟಿನಿಂದಲೂ ಕಾಪಾಡುತ್ತದೆ.
ಹೆಚ್ಚು ಕಡಿಮೆ ಐದಾರು ವರ್ಷಗಳ ಹಿಂದೆ `ಪಂಜಾಬಿ'ಗೆ ಹೋಗಿದ್ದರು. `ಪಂಚನದಿಗಳ ಬೀಡು' ಎಂದೇ ಖ್ಯಾತಿ ಪಡೆದ ಪಂಜಾಬಿಗೆ `ಕಥನ' ಹುಡುಕಿಕೊಂಡು ಹೋಗಿದ್ದರು.
ಆ ಪುಸ್ತಕದಲ್ಲಿ ಜೀವನ ಪ್ರೀತಿ ಕಂಡುಕೊಂಡಿದ್ದೆ. ಬದುಕನ್ನು ಅದರಲ್ಲೂ ವಿಭಿನ್ನ ಬದುಕಿನ ರೀತಿಯಿರುವ ಸಂಸ್ಕøತಿಯನ್ನು ಭಾಷೆಯನ್ನು, ಜನ ಜೀವನವನ್ನು ಹುಡುಕಿಕೊಂಡು ಶಹಾಪುರದಿಂದ ಪಂಜಾಬಿನ ತನಕ ಹೋಗಿದ್ದರು.
ಆವತ್ತು ಪಂಜಾಬಿನ ಕಡೆಗೆ ಹೋಗುವಾಗ ಆತಂಕವಿತ್ತು. ಹೋಗುವುದಕ್ಕೆ ಮುಂಚೆಯೇ `ಹೋಗಲು ವಿಶ್ವಾಸವಿರಲಿಲ್ಲ.' ಹೇಗೋ ಹೋಗಿ ಬಂದರು. `ಕಥನ' ಸೃಷ್ಟಿಸಿದರು. ಜನಪ್ರಿಯವಾಯಿತು. ನಾಲ್ಕು ಜನ ಬದಲು ಎಂಟು ಜನ ಓದಿದರು. ಪತ್ರದಲ್ಲಿ, ಫೋನಿನಲ್ಲಿ, ಅಲ್ಲಲ್ಲಿ ಸಿಕ್ಕಾಗ `ಪಂಜಾಬಿನ ಕಥನ' ಕುರಿತು ನಾಲ್ಕು ಒಳ್ಳೆಯ ಮಾತಾಡಿದರು. ಅದರ ಪರಿಣಾಮವೇ ಇವತ್ತು.., ಹಿಮಾಲಯದ ತಪ್ಪಲಲ್ಲಿ ನಿಂತು ಬಂದಿದ್ದಾರೆ. ರೈಲ್ವೆಯಲ್ಲಿ ಕುಳಿತಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ. ಆಗ್ರಾ ಅಂಗಳದಲ್ಲಿ ನಿಂತಿದ್ದಾರೆ. ಸ್ವಾಮಿ ವಿವೇಕಾನಂದರ ಬಂಡೆಗಲ್ಲು ತಲುಪಿ ಬಂದಿದ್ದಾರೆ. ದಿಲ್ಲಿಯ ರಸ್ತೆಗಳಲ್ಲಿ.. ಅಂಗಡಿಗಳಲ್ಲಿ.. ಹರಿದ್ವಾರ-ಋಷಿಕೇಶ ಮೆಟ್ಟಿಲುಗಳಲ್ಲಿ..  ಗೌರಿಕುಂಡದ ಬಿಸಿ ನೀರಿನ ಸ್ಪರ್ಶದಲ್ಲಿ.. ಕೇದಾರನಾಥದಲ್ಲಿ.. ಬದ್ರಿನಾಥದಲ್ಲಿ.. ನಡುವೆ ಶಂಕರಾಚಾರ್ಯರ ಮಠದಲ್ಲಿ.. ಹೀಗೆ ಸಾಗುತ್ತದೆ ಹೊನ್ಕಲ್ ಅವರ `ಕಥನ'.
ಈ ಎಲ್ಲದರ ನಡುವೆ `ಪರ್ಸನಲ್' ಘಟನೆಗಳು, ಹೆಂಡತಿ ಕಳೆದು ಹೋಗಿದ್ದು ಡಾಕ್ಟರನ್ನು ಹುಡುಕಿದ್ದು, ಪ್ರೇಯಸಿಯನ್ನು ನೆನಪು ಮಾಡಿಕೊಂಡದ್ದು.. ಮುಂತಾದ ಅವರ ಪ್ರವಾಸದ `ಗ್ರಾಫು’ ದೊಡ್ಡದಿದೆ.
ಹಿರಿಯ ಲೇಖಕರಾದ ಎಸ್.ಎಲ್. ಭೈರಪ್ಪನವರ `ವಿನಾಕಾರಣ' ಕಾದಂಬರಿಯನ್ನು 23 ವರ್ಷಗಳ ಹಿಂದೆ ಓದಿದಾಗಲೇ `ಹಿಮಾಲಯ'ದ ಪರ್ವತದಲ್ಲಿ ನಿಂತು ಬರಬಾರದೇಕೆ? ಆ ಶಿಖರ ಶ್ರೇಣಿಗಳನ್ನು ಅತ್ಯಂತ ಹತ್ತಿರದಿಂದ ನಿಂತು ನೋಡಬಾರದೇಕೆ? ಹಿಮ ಹೆಪ್ಪುಗಟ್ಟುವ ಕ್ರಿಯೆ ಸಾಕ್ಷಾತ್ ಕಾಣಬಾರದೇಕೆ? ಬಾರಾಮಾನೆ ಸಾಧು ಪ್ರವಾಹದ ಗುಂಟ ಈಜುವ ಅನುಭವವನ್ನು ಪಡೆಯಬಾರದೇಕೆ? ಎಂಬ ಅನೇಕ `ಏಕೆ’ಗಳೇ ಪ್ರವಾಸ ಕಥನಕಾರ ಹೊನ್ಕಲ್‍ರನ್ನು ಹಿಮಾಲಯಕ್ಕೆ ಕರೆದುಕೊಂಡು ಹೋಗಿದೆ.
ಆದರೆ, ಹೊರಡುವ ಮುನ್ನ ಒಂದು ಸ್ಪಷ್ಟತೆಯಿರಲಿ ಎಂದು `ಕನ್ಯಾಕುಮಾರಿಯಿಂದ’ ಎಂಬ ಟೈಟಲ್ಲು ಕೊಟ್ಟು ಪ್ರವಾಸ ಆರಂಭಿಸಿದ್ದಾರೆ. ಈ ಕಥನದಲ್ಲಿ ಬರುವ ಅನೇಕ ಖಾಸಗಿ ಘಟನೆಗಳನ್ನು ಸಹಜವಾಗಿ, ಕರಾರುವಾಕ್ಕಾಗಿ ಬರೆಯುವುದರಲ್ಲಿ, ಓದುವುದರಲ್ಲಿ ಅರ್ಥವಂತಿಕೆ ಇದೆ.
ಮನುಷ್ಯನಿಗೆ `ಗೌರವಾನ್ವಿತ ಮುಪ್ಪು' ಬರದೇ ಇದ್ದರೂ, ಆ ವಯಸ್ಸಿಗೇ ಮಾಡಬೇಕು ಎಂದು ಹೇಳುವ `ತೀರ್ಥಯಾತ್ರೆ'ಯ ನಿಯಮಾವಳಿಯ ಮಾತನ್ನು ತುಂಡರಿಸಿದ್ದಾರೆ. ಅರವತ್ತು ದಾಟದೇ ಇರುವ 
ಹೊನ್ಕಲ್‍ರು `ತೀರ್ಥಯಾತ್ರೆ'ಯನ್ನು ಬರೆದಿದ್ದಾರೆ. ಮತ್ತು ಅದು ಓದಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. 
ಅಂದವಾಗಿ ಮೂಡಿಬಂದಿರುವ ಪುಸ್ತಕದಲ್ಲಿ ಕಥನದ ಆಯಾಸವೇನೂ ಇಲ್ಲ. ಕಥನದುದ್ದಕ್ಕೂ ಮಾತನಾಡಿದ್ದಾರೆ. ಸಹಜವಾಗಿ ಗೊತ್ತಿರುವುದನ್ನು ಹೇಳಿದ್ದಾರೆ. ಗೊತ್ತಿಲ್ಲದಿರುವುದನ್ನು ಗೊತ್ತು ಮಾಡಿಕೊಂಡು ಹೇಳಿದ್ದಾರೆ. ಕೆಲವರು ಹೊಟ್ಟೆಯಲ್ಲಿ ಬಚ್ಟಿಟ್ಟುಕೊಳ್ಳುವಂತೆ, ಹೊನ್ಕಲ್ ಅವರು ಏನನ್ನೂ ಇಟ್ಟುಕೊಂಡಿಲ್ಲ.
ನೆನಪಾದದ್ದನ್ನು ನೆನಪಾದಂತೆ ಹೇಳುವ ಹಿರಿಯ ಲೇಖಕ, ಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ ಅವರ ಬರಹ ಒಂದು ಕಡೆ, ಇಡೀ ಪ್ರವಾಸವನ್ನು ಒಂದೇ ಗಿಕ್ಕಿನಲ್ಲಿ ಕಾವ್ಯದಂತೆ ಚಿತ್ರಿಸಿರುವ ಹಿರಿಯ ಪತ್ರಕರ್ತ ಲೇಖಕರಾದ ಜಿ.ಎನ್. ಮೋಹನ್ ಇನ್ನೊಂದು ಕಡೆ, ಪ್ರವಾಸದ ಅನುಕ್ರಮದಲ್ಲಿ ಕಥನ ಹೇಳುವ ಇರಾದೆ ಇದೆಯಲ್ಲ ಅದು ನಮ್ಮ ಸಿದ್ಧರಾಮ ಹೊನ್ಕಲ್‍ರ ಕ್ರಮ.
ಪ್ರವಾಸ ಕಥನ ಹೀಗೆಯೇ ಇರಬೇಕು ಎಂಬ ನಿಯಮವೇನಿಲ್ಲ. ಹೇಗಿದ್ದರೂ ನಡೆದೀತು. ಈ ಕಥನದ ಪ್ರವಾಸ ಶುರುವಾಗುವುದು ಶಹಾಪುರದಿಂದ. ಕನ್ನಡದ ಪ್ರಮುಖ ಪತ್ರಿಕೆಗಳಾದ ಹಾಯ್ ಬೆಂಗಳೂರು, ಲಂಕೇಶ ಪತ್ರಿಕೆ, ಅಗ್ನಿ, ಮಯೂರ ಸೇರಿದ ಮುಂತಾದ ಪತ್ರಿಕೆಗಳನ್ನು ಹೊತ್ತುಕೊಂಡ ಬ್ಯಾಗು.. ಆ ಮೂಲಕ ಸಾಹಿತ್ಯದ ಮತ್ತು ಈ ನೆಲದ  ಪ್ರೀತಿ ಹೆಚ್ಚಾಗುವಂತೆ ಮಾಡುತ್ತದೆ. ಅದನ್ನು ಬಿಡುವಾಗ ಏನೇನೋ ಕಲ್ಪಿಸಿಕೊಳ್ಳುತ್ತೇವೆ. ಅದಕ್ಕಾಗಿ ಇನ್ನೇನೋ ಇಲ್ಲಿಂದಲೇ ಖರೀದಿಸುತ್ತೇವೆ. `ಮಣ್ಣಿನ ಪ್ರೀತಿ' ಬೆಚ್ಚಗಾಗಿಸುತ್ತದೆ. ಹುಚ್ಚನನ್ನಾಗಿಸುತ್ತದೆ. ಪ್ರವಾಸ ಶುರುವಾದ ಮೇಲೆ ಇದ್ದೇ ಇದೆಯಲ್ಲ `ಕಥನ’. 
ದೇವಸ್ಥಾನ, ನದಿ, ಬಂಡೆಗಲ್ಲು, ದಿಲ್ಲಿ ಎಂಬ ದೊರೆಸಾನಿ, ಸುಖದ ಪ್ರವಾಸ, ದುಃಖದ ಪ್ರಸವ, ಕಡೆಗೆ ಮತ್ತೆ ಮರಳಿ ಮಣ್ಣಿಗೆ, ಶಹಾಪುರದ ನೆಲದೆಡೆಗೆ. ಈ ಎಲ್ಲ ವಿಸ್ಮಯಗಳನ್ನು ಹೇಳಿದ ಕನ್ನಡಿ ಇಲ್ಲಿದೆ. ಅದರ ಹೆಸರೇ `ಕನ್ಯಾಕುಮಾರಿಯಿಂದ ಹಿಮಾಲಯದೆಡೆಗೆ’ ಮತ್ತು ಈ ರೀತಿಯ ಬರವಣಿಗೆಯನ್ನು ಲವಲವಿಕೆಯಿಂದ ಬರೆಯುತ್ತಲೇ ಓದುಗ ಮನಸ್ಸುಗಳಿಗೆ ಏಕದಂ ಲಗ್ಗೆ ಹಾಕುವ ಲೇಖಕನ ಹೆಸರು, ಒನ್ಸ್ ಅಗೇನ್... ಸಿದ್ಧರಾಮ ಹೊನ್ಕಲ್. 

ಕೊನೆ ಮಾತು : ತಮ್ಮ ಸಮಕಾಲೀನ ಸಂದರ್ಭದಲ್ಲೂ ಅನೇಕರಿಗೆ ಹೊಟ್ಟೆಕಿಚ್ಚು ಆಗುವಂತೆ ಬರೆಯುತ್ತಿರುವ ಸಿದ್ಧರಾಮ ಹೊನ್ಕಲ್ ಅವರು, ಬರವಣಿಗೆ ಯಾತ್ರೆಯನ್ನು ನಿರಾತಂಕವಾಗಿ ಮುಂದುವರಿಸಲಿ. ಏಕೆಂದರೆ, ಅವರು ಬರವಣಿಗೆಯಿಂದಲೇ ಸೆಲೆಬ್ರಿಟಿಯಾಗುತ್ತಿರುವ ಕಥನಕಾರರು.
ಅದಕ್ಕೆ ಹೇಳಿದ್ದು, 
`ಗಿರಿ’ ಸಾಲುಗಳ ನಡುವೆ ಈತ `ಹೊನ್ನ’ಕಲ್.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಊರು ಹಳ್ಳಿ..

ಕಪ್ಪು ಕಡಲು

ನನ್ನೂರಿನಲ್ಲಿ 'ಎಂ ಎಂ ಕಲಬುರಗಿ'..