ಅನುಭವದ ಪಕ್ಕಾತನ


ಮಹಿಪಾಲರೆಡ್ಡಿ ಕಾಲಂ






ಬಹುಶಃ 60 ರಿಂದ 80 ರ ದಶಕದಲ್ಲಿ ಬರೆಯಬಹುದಾದ ಕಥಾ ವಸ್ತುವನ್ನೊಳಗೊಂಡ `ತೃಪ್ತಿ’ ಎನ್ನುವ ಕಥಾ ಸಂಕಲನವನ್ನು ಕೊಟ್ಟವರು ಕಥೆಗಾರ  ಸುಬ್ರಾವ ಕುಲಕರ್ಣಿ.
`ತೃಪ್ತಿ’ ಕಥಾ ಸಂಕಲನದ ಎಲ್ಲಾ ಕತೆಗಳನ್ನು ಓದಿದ ನಂತರ, ಮೊದಲ ಗಿಕ್ಕಿನಲ್ಲಿಯೇ ಹೇಳಬಹುದಾದ ಸಂಗತಿಯೆಂದರೆ, ಸಾಮಾಜಿಕ ಸಭ್ಯತೆ ಹಾಗೂ ಸೌಜನ್ಯಗಳ ಚೌಕಟ್ಟು.. ಇದರೊಳಗೆ ಅಪೇಕ್ಷಿತ ರಮಣೀಯತೆಯನ್ನು ಸಾಧಿಸುವ ಕೌಶಲ್ಯವನ್ನು ಕಥೆಗಾರ   ಸುಬ್ರಾವ ಕುಲಕರ್ಣಿ   ಹೊಂದಿದ್ದಾರೆ.
ಬಹುಶಃ ಇಲ್ಲಿನ ಕತೆಗಳನ್ನು ಓದಿಯಾದ ಮೇಲೆ ಅನಿಸಿದ್ದು ಇಷ್ಟು. ಸಾಮಾಜಿಕವಾಗಿ ಒಪ್ಪಿತವಾದ ಮೌಲ್ಯ ಮತ್ತು ಆದರ್ಶಗಳ ಬಗ್ಗೆ ಶ್ರದ್ಧೆಯನ್ನು ಬಲಗೊಳಿಸುವುದಿದೆಯಲ್ಲ.. ಅದು ಕತೆಗಾರ   ಸುಬ್ರಾವ ಕುಲಕರ್ಣಿ ಅವರ ಆಶಯವಾಗಿರುವುದೇ ಇದಕ್ಕೆ ಕಾರಣ.
`ತೃಪ್ತಿ’ ಸಂಕಲನದ ಕೆಲ ಕತೆಗಳಲ್ಲಿ ಗಾಢವಾದ ಧಾರ್ಮಿಕ ಶ್ರದ್ಧೆಯಿಂದ ಬದುಕಿನ ವ್ಯವಹಾರಗಳನ್ನೆಲ್ಲ ಪರಿಭಾವಿಸುವ ವ್ಯಾಖ್ಯಾನಿಸುವ, ಬೆಲೆ ಕಟ್ಟುವ ಸಾತ್ವಿಕ ಮನಸ್ಸು  ಸುಬ್ರಾವ ಕುಲಕರ್ಣಿ ಅವರ ಕಥೆಗಳಲ್ಲಿ ರೂಪು ತಳೆಯುವ ಅನುಭವವನ್ನು ನಿಯಂತ್ರಿಸುತ್ತಿರುವಂತೆ, ನಿರ್ದೇಶಿಸುತ್ತಿರುವಂತೆ ಅನಿಸುತ್ತದೆ.
ಶ್ರದ್ಧೆ, ನಂಬಿಕೆಗಳನ್ನು ಪ್ರಶ್ನಿಸುವ ಸನ್ನಿವೇಶ, ಸಂದರ್ಭಗಳು ಎದುರಾಗುವ ತೃಪ್ತಿ ಕತೆಗಳಲ್ಲಿ ಆ ಸಾಂಪ್ರದಾಯಿಕ ಮೌಲ್ಯಗಳ ಚೌಕಟ್ಟಿನಲ್ಲಿಯೇ ಅದಕ್ಕೆ ಪರಿಹಾರವನ್ನು ಹುಡುಕುವ, ಸೂಚಿಸುವ ಮಾರ್ಗಸೂಚಿಯಂತಹ ನಿಲುವುಗಳು   ಸುಬ್ರಾವ ಕುಲಕರ್ಣಿ  ಕತೆಗಳಲ್ಲಿ ಕಾಣುತ್ತೇವೆ. ಈ ಮಿತಿಯಲ್ಲಿಯೇ ಸಾಧ್ಯವಾಗುವ ಅನುಭವವನ್ನು   ಸುಬ್ರಾವ ಕುಲಕರ್ಣಿ  ಅನುಭವದ `ಪಕ್ಕಾತನ’ ಗೋಚರವಾಗುತ್ತದೆ.

ವಿಶಿಷ್ಟ ಕೌಟುಂಬಿಕ ಮತ್ತು ಸಾಮಾಜಿಕ ಸಂದರ್ಭದ ಪರಿಸ್ಥಿತಿಯೊಂದರಲ್ಲಿ ಹುಟ್ಟಿಕೊಳ್ಳುವ ಅಥವಾ ಸಿಕ್ಕಿಹಾಕಿಕೊಳ್ಳುವ ಅನುಭವದ ಪದರ ಪದರಗಳನ್ನು ಎಳೆ ಎಳೆಯಾಗಿ ಬಿಚ್ಚುತ್ತ.. ಅರ್ಥ ಛಾಯೆಗಳನ್ನು ಧ್ವನಿಸುವ ಪ್ರಕ್ರಿಯೆಯನ್ನು `ತೃಪ್ತಿ’ ಕಥಾಸಂಕಲನದಲ್ಲಿ ನೋಡಬಹುದು. ಪ್ರತಿ ಕಥೆಯನ್ನು ಓದುವಾಗಲೂ ಅನಿಸಿದ್ದೇನೆಂದರೆ, ನಿರೂಪಣಾ ರೀತಿ.. ತಂತ್ರಗಳಿಲ್ಲದೆ, ಸರಳವಾಗಿ ಬರೆದಿದ್ದು, ಸೆಂದೋ ಎಲ್ಲಿಯೋ ನಡೆದ ಕಥೆಯನ್ನು ಹೆಣೆದ ಕಥೆಗಳಲ್ಲ. ತಮ್ಮ ನಡುವೆ, ತಮ್ಮ ಮುಂದೆ, ತಮ್ಮ ಸ್ವಾನುಭವದ ವಸ್ತುಗಳೇ ಕತೆಗಳನ್ನಾಗಿಸಿದ್ದಾರೆ. ಇನ್ಯಾರೋ ಹೇಳುವ ತಂತ್ರಗಾರಿಕೆ ಯಾವ ಕತೆಯಲ್ಲಿಯೂ ಕಂಡುಬರಲ್ಲ. ಕಥಾ ನಿರೂಪಣೆಯ ಶೈಲಿಯ ಸಂಗತಿಗಳನ್ನು ಕಥೆಯ ಸಂದರ್ಭದಲ್ಲಿ ತೀರಾ ಸಹಜವೆಂಬಂತೆ ಹೇಳುತ್ತಲೇ, ಒಂದರ ಜೊತೆಗೆ ಇನ್ನೊಂದು ಸಂಗತಿಗೂ ಆತ್ಮೀಯ ಇಲ್ಲವೇ ಒಳಸಂಬಂಧಗಳನ್ನು ನವಿರಾಗಿ ಜೋಡಿಸಿಮ ಅವುಗಳ ಅರ್ಥವಂತಿಕೆಯನ್ನು ಹೆಚ್ಚಿಸುತ್ತ ಕಥೆ ಕಟ್ಟುವ ಸರಳ ಕಲೆ   ಸುಬ್ರಾವ ಕುಲಕರ್ಣಿ ಕರತಗವಾಗಿದೆ. ಮೊದಲ ಕಥೆ `ತೃಪ್ತಿ’ ಮೂಲಕವೇ ಕಥಾ ಲೋವನ್ನು ಪ್ರವೇಶ ಮಾಡಿರುವ   ಸುಬ್ರಾವ ಕುಲಕರ್ಣಿ ಅವರಿಗೆ ಹೆಚು ಜನಪ್ರಿಯತೆ ಮತ್ತು ಪ್ರಸಿದ್ಧಿಯನ್ನು ತಂದಿದೆ. ಅದರ `ಗ್ರಹಣ’ ಎನ್ನುವ ಇನ್ನೊಂದು ಕತೆ. ಅವರ ಬಹುಪಾಲು ಕತೆಗಳು ಒಂದು ಕೌಟುಂಬಿಕ ಇಲ್ಲವೇ ಕಚೇರಿ ಇಲ್ಲವೇ ಒಂದೂರಿನ ಚೌಕಟ್ಟಿನಲ್ಲಿಯೇ ನಡೆಯುತ್ತವೆ.
ಕೆಲ ಕಥೆಗಳಲ್ಲಿ ಪ್ರಗತಿಶೀಲ ಮಾರ್ಗದ ಬರಹದ ತುಡಿತ ಕಾಣುತ್ತೇವೆ. ಬಂಡಾಯದ ಮನೋಭೂಮಿಕೆ ಅಲ್ಲಲ್ಲಿ ಕೆಲ ಸಾಲುಗಳಲ್ಲಿ ನೋಡಬಹುದು. ಅಬ್ಬರದ ಬರವಣಿಗೆ ಇಲ್ಲದಿದ್ದರೂ ಆಂತರಿಕವಾದ ಬುಸುಗುಡು, ಸಿಡಿದೇಳುವ ಸಾತ್ವಿಕ ಅಂತಃಕರಣದ ಅನುತಾಪ ಅಲ್ಲಲ್ಲಿ ಗೋಚರವಾಗುತ್ತದೆ.
ತೆಂಗಿನಕಾಯಿ ದೇವರಿಗೆ ಒಡೆದು ಅರ್ಧ ಅಲ್ಲೇ ಬಿಟ್ಟು ಇನ್ನರ್ಧ ತರಬೇಕಂತೆ. ಏನು ಸಂಪ್ರದಾಯವೋ ಅನಿಸುತ್ತದೆ. . ಈ ಏನು ಸಂಪ್ರದಾಯವೋ ಎಂಬ ಪ್ರಶ್ನೆಯೇ ಪ್ರಗತಿಶೀಲ ಭಾವನೆ ನೋಡುತ್ತೇವೆ.
ಒಂದು ವ್ಯಕ್ತಿ , ವ್ಯಕ್ತಿಯಾಗಿ ಕಾಣಿಸದೇ ಒಂದು ತತ್ವದ, ಒಂದು ಆದರ್ಶ ಮೌಲ್ಯದ ಪ್ರತಿನಿಧಿಯಾಗಿ ಕಾಣಿಸುವ ಅನುಭವ   ಸುಬ್ರಾವ ಕುಲಕರ್ಣಿ  ಕತೆಗಳಲ್ಲಿದೆ.
ಬಹುಶಃ ಈ ಸಂಕಲನಕ್ಕೆ ಮುನ್ನುಡಿ ಬರೆದಿರುವ ಆಗಿನ ಗುಲಬರ್ಗಾ ವಿವಿ ಕುಲಸಚಿವರಾಗಿದ್ದ   ಜಯತೀರ್ಥ ರಾಜಪುರೋಹಿತ ಬರೆದ ಸಾಲುಗಳು ಹೀಗಿವೆ. ತಾನಿರುವ ಪರಿಸರದಿಂದಲೇ ತನ್ನ ಬರಹಗಳಿಗಾಗಿ ಸಾಮಗ್ರಿಯನ್ನು ಆಯ್ದುಕೊಳ್ಳುವುದು ಸಹಜ. ಕುಲಕರ್ಣಿಯವರ ಕಥೆಗಳಲ್ಲಿ ಮಧ್ಯಮ ವರ್ಗದ ವಿದ್ಯಾವಂತ ಕುಟುಂಬದಲಲಿ ಕಂಡುಬರು ಸಂಪ್ರದಾಯ ಮತ್ತು ವೈಚಾರಿಕ ತಾಕಲಾಟ, ಆರ್ಥಿಕ ಮುಗ್ಗಟ್ಟಿನಲ್ಲಿ ನಡೆಯುವ ಸೆಣಸಾಟ, ಅರೆಪಕ್ವ ವಿಚಾರಗಳಿಂದ ತೊಳಲಾಡುವ ಯುವ ಪೀಳಿಗೆಯ ದುರಂತ, ಅನಂತ ಆಸೆ ಆಮಿಷಗಳಲ್ಲಿ ಕನಸುಗಾರಿಕೆಯಲ್ಲಿಯೂ ಕೆಲವೊಮ್ಮೆ ವಿವೇಕದ ತೂಕ ತಪ್ಪಿಸಿಕೊಳ್ಳದ ಸಂಸ್ಥಾರವಂತ ಮನಸ್ಸಿನ ವಿವರಣೆ ಇವೆಲ್ಲ ಇವರ ಕಥೆಗಳಲ್ಲಿ ವ್ಯಕ್ತವಾಗಿವೆ.
ಈ ಮಾತುಗಳು   ಸುಬ್ರಾವ ಕುಲಕರ್ಣಿ ಅವರ ಒಟ್ಟು ಕಥೆಗಳ ಆಶಯವಾಗಿದೆ. ಇವರ ಕತೆಗಳ ಆಳಾಂತರವನ್ನು ಒಂದೇ ಗಿಕ್ಕಿನಲ್ಲಿ ಹಿಡಿದಿಟ್ಟ   ಜಯತೀರ್ಥ ರಾಜಪುರೋಹಿತ ಅವರ ಮುನ್ನುಡಿ ಅಕ್ಷರಶಃ ತೃಪ್ತಿ ಕಥಾ ಸಂಕಲನದ ಮುಕುಟಪ್ರಾಯವಾಗಿದೆ.
ಹಿರಿಯ ಲೇಖಕರಾದ   ಚಂದ್ರಕಾಂತ ಕುಸನೂರ ಅವರು ಕಥಾ ಸಂಕಲನಕ್ಕೆ ವಿಶ್ಲೇಷಣೆಯ ನುಡಿಗಳನ್ನು ಕೊಟ್ಟಿದ್ದಾರೆ. `ಕುಲಕರ್ಣಿಯವರಿಗೆ ಕಾಡಿಸುವಂತಹ ಅನೇಖ ಘಟನೆಗಳು ಕತೆಯಾಗಿ ನಿಂತಿವೆ. ತನ್ನ ಪರಿಸರದಲ್ಲಿದ್ದುಕೊಂಡು, ಸ್ಪಂದಿಸುವ ಜೀವನ ದಲ್ಲಿ ಮೂಡಿಬಂದ ಸುಖ, ಆಸೆ-ನಿರಾಸೆಗಳೊಡನೆ ಬದುಕು ಸಾಗಿಸುತ್ತಿರುವ ಮನುಷ್ಯನ ವರ್ಣಮಯ ಜೀವನವನ್ನು, ಜೀವನದ ಒಂದೊಂದು ಬಗೆಯ ಆಯಾಮವನ್ನು ತೋರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ಕತೆಗಳಲ್ಲಿ ವಸ್ತು ವೈವಿಧ್ಯತೆ ಕಂಡುಬಂದರೂ ತಾನು ಹೇಳಬೇಕಾದ್ದನ್ನು ಅಚ್ಚು-ಕಟ್ಟಾಗಿ ಹೇಳಿದ್ದಾರೆ. ಆಡಂಬರ ರಹಿತವಾದ ಭಾಷೆ, ಅಲಂಕಾರಗಳಿಂದ ಮುಕ್ತವಾದ ಶೈಲಿ, ನೇರವಾ ಸರಳತೆಯಿಂದ ಹೇಳುವ ರಿತಿ, ಇವುಗಳಿಂದಾಗಿ ಕತೆಗಳೆಲ್ಲವೂ ಓದಿಸಿಕೊಂಡು ಹೋಗುತ್ತವೆ.
ಅನೇಕ ಲೇಖಕರಿಗೆ ಕಾಡಿಸುವ ಕಾಮ, ಪ್ರೇಮ ಇನ್ನು ಕೆಲ ಸಂಗತಿಗಳು ಕುಲಕರ್ಣಿಯವರ ಕತೆಗಳಲ್ಲಿವೆ. ಆದರ್ಶ ವಾಸ್ತವಿಕ ಜೀವನವನ್ನು ಎದುರಿಸುವ ಹಂಬಲ, ಮಾನವನ ಸಹಜವಾದಂತಹ ಸೋಲು, ಇವೆಲ್ಲವೂ ಒಂದಿಲ್ಲ ಒಂದು ಕತೆಯಲ್ಲಿ ಕಾಣಿಸುತ್ತದೆ.
ಸುಬ್ರಾವ ಕುಲಕರ್ಣಿಯವರ ಅನೇಕ ಕತೆಗಳಲ್ಲಿ ಒಬ್ಬ ವ್ಯಕ್ತಿಯ, ಒಂದು ಸಮಾಜದ, ಒಂದು ತತ್ವದ, ಒಂದು ಆದರ್ಶದ ಜಿಜ್ಞಾಸೆಯಾಗಿರದೆ ಎಲ್ಲವೂ ಏಕ ಕೇಂದ್ರದಲ್ಲಿ ಗಾಢವಾಗಿ ಎದುರಾಗುವ, ತಮ್ಮನ್ನು ತಾವೇ ಅನನ್ಯವಾಗಿ ಪಡೆದುಕೊಳ್ಳುವ ಕ್ರಿಯೆಯಾಗಿವೆ. ಸಾಹಿತ್ಯಿಕ ಮಹತ್ವವನ್ನು ಗುರುತಿಸುವುದರ ಜೊತೆಗೆ, ಎಪ್ಪತ್ತರ ದಶಕದ ಮೌಲ್ಯಗಳನ್ನು,  ಸಾಹಿತ್ಯಿಕ ದೃಷ್ಟಿಯಿಂದ ಒಂದು ಚಾರಿತ್ರಿಕ ಸಂಗತಿಯನ್ನು ವಿಮರ್ಶಾಪ್ರಜ್ಞೆಯ ಮೂಸೆಯಿಂದ ನೋಡದೆ, ಕತೆಗಳ ಬರಹ ಕಾಲದ ಸಂದರ್ಭವನ್ನು ಪರಿಭಾವಿಸುವ ಕ್ರಮದ ಮುದ್ರೆಯನ್ನು ಆಕಾರ ಪಡೆದ ಅನುಭವದ ಪ್ರತೀತಿಗೆ ವಸ್ತು-ಪ್ರತಿರೂಪವಾಗಿ ಅಸ್ತಿತ್ವ ಪಡೆದದ್ದನ್ನು ನೆನಪಿಸಿಕೊಂಡು ಸಂಭ್ರಮ ಪಟ್ಟಿದ್ದೇನೆ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಊರು ಹಳ್ಳಿ..

ನನ್ನೂರಿನಲ್ಲಿ 'ಎಂ ಎಂ ಕಲಬುರಗಿ'..

ಕಪ್ಪು ಕಡಲು